ಪ್ರಯಾಣಿಕನ ಮರ

	ಸ್ಟ್ರಲಿಟ್ಜಿಯೇಸೀ ಕುಟುಂಬಕ್ಕೆ ಸೇರಿದ ಮರ (ಟ್ರಾವಲರ್ಸ್ ಟ್ರೀ). ರಾವೆನಾಲ ಮ್ಯಾಡಗ್ಯಾಸ್ಕೆರಿಯೆನ್ಸಿಸ್ ಇದರ ಸಸ್ಯಶಾಸ್ತ್ರೀಯ ಹೆಸರು. ಆಫ್ರಿಕ ಖಂಡದ ಆಗ್ನೇಯದಲ್ಲಿರುವ ಮ್ಯಾಲಗ್ಯಾಸೀ (ಮ್ಯಾಡಗ್ಯಾಸ್ಕರ್) ದ್ವೀಪ ಇದರ ತವರು. ಅಲಂಕಾರ ಸಸ್ಯವಾಗಿ ಇದನ್ನು ಭಾರತದ ಉದ್ಯಾನಗಳಲ್ಲಿ ಬೆಳೆಸಲಾಗಿದೆ.

	ತವರಿನಲ್ಲಿ ಸುಮಾರು 30ಮೀ. ಎತ್ತರಕ್ಕೆ ಬೆಳೆಯುವ ಇದು ಭಾರತದಲ್ಲಿ 6-12ಮೀ. ಎತ್ತರಕ್ಕೆ ಮಾತ್ರ ಬೆಳೆಯುವುದು. ನೈಜಕಾಂಡ ನೆಲದೊಳಗೇ ಹುದುಗಿರುತ್ತದೆ. ಕಾಂಡದಂತೆ ಕಾಣುವ ಮಿಥ್ಯಾಕಾಂಡ ನೆಲದಿಂದ ಮೇಲಕ್ಕೆ ಬೆಳೆದಿದ್ದು ಅದರ ಮೇಲೆ ಎಡಬಲ ಪಕ್ಕಗಳಲ್ಲಿ ಒಂದಾದ ಮೇಲೆ ಒಂದರಂತೆ ಒತ್ತಾಗಿ ಜೋಡಣೆಗೊಂಡಿರುವ ಎಲೆಗಳಿವೆ. ಇವುಗಳ ಜೋಡಣೆ ವಿಚಿತ್ರವಾಗಿದ್ದು ಇಡೀಮರ ಹಿಡಿಯಿರುವ ಬೀಸಣಿಗೆಯಂತೆ ಕಾಣುತ್ತದೆ. ಎಲೆಗಳು ದೊಡ್ಡವು; ಪ್ರತಿ ಎಲೆ 2-3ಮೀ. ಉದ್ದುವೂ 1.0-1.5ಮೀ. ಅಗಲವೂ ಇವೆ. ನೋಡಲು ಬಾಳೆ ಎಲೆಯಂತೆ ಕಾಣುವುವು. ಎಲೆಗಳ ಬುಡಗಳು ಮಿಥ್ಯಾಕಾಂಡದ ಸುತ್ತ ಆವರಿಸಿ ಒಂದು ರೀತಿಯ ರಸಧಾನಿಗಳಂತಿವೆ. ಇದರಲ್ಲಿ ನೀರು ಸಂಗ್ರಹವಾಗುತ್ತದೆ. ದಾರಿಹೋಕರು ಈ ನೀರನ್ನು ಕುಡಿಯುವರು ಎಂದು ಹೇಳಲಾಗುತ್ತದೆ ಆದ್ದರಿಂದಲೇ ಈ ಮರಕ್ಕೆ ಪ್ರಯಾಣಿಕನ ಮರ ಎಂಬ ಹೆಸರು ಬಂದಿದೆ. ಹೊಗಳು ಎಲೆಗಳ ಕಕ್ಷಗಳಲ್ಲಿ ಮೂಡುವ ಮಂಜರಿಗಳಲ್ಲಿ ಜೋಡಣೆಗೊಂಡಿರುವುವು. ಪ್ರತಿ ಹೂವಿನ ಸುತ್ತ ದೊಡ್ಡ ವೃಂತಪತ್ರ (ಬ್ರಾಕ್ಟ್) ಉಂಟು. ಫಲ ಸಂಪುಟ ಮಾದರಿಯದು. ಬೀಜಗಳು ನೀಲಿ ಇಲ್ಲವೆ ಊದಾ ಬಣ್ಣದ ಏರಿಲ್‍ನಿಂದ ಆವೃತವಾಗಿವೆ.

	ಪ್ರಯಾಣಿಕನ ಮರ ಉಷ್ಣತೆ ಮತ್ತು ಆದ್ರ್ರತೆ ಹೆಚ್ಚಾಗಿರುವಂಥ ತಗ್ಗು ಮೈದಾನ ಪ್ರದೇಶಗಳಲ್ಲಿ ಚನ್ನಾಗಿ ಬೆಳೆಯುತ್ತದೆ. ಬೀಜಗಳ ಇಲ್ಲವೆ ಕಂದುಗಳ ಮೂಲ ವೃದ್ಧಿಸಬಹುದು.

	ಮ್ಯಾಲಗ್ಯಾಸೀಯಲ್ಲಿ ಇದರ ಕಾಂಡವನ್ನು ಮನೆ ಕಟ್ಟುವುದಕ್ಕೂ, ಎಲೆಗಳನ್ನು ಚಾವಣಿಗೆ ಹೊದಿಸಲೂ ಬಳಸುವುದುಂಟು. ಎಲೆಗಳು ಉತ್ತಮ ಪ್ಯಾಕಿಂಗ್ ಸಾಮಗ್ರಿಯೂ ಹೌದು. ಇದರ ಕೋಶರಸದಿಂದ ಸಕ್ಕರೆಯನ್ನು ತಯಾರಿಸುವುದೂ ಇದೆ. ಇದರ ಬೀಜಗಳು ಖಾದ್ಯಯೋಗ್ಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ